Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಗಡಿನಾಡ ಜನತೆಯ ವಂಚನೆಗೆ ಒಂದು ವರ್ಷ: ಘೋಷಣೆಯಾಗಿಯೇ ಉಳಿದ ವೈದ್ಯಕೀಯ ಕಾಲೇಜು !

ಬದಿಯಡ್ಕ(ಕಾಸರಗೋಡು): ಗಡಿನಾಡಿನ ಅಭಿವೃದ್ದಿಯ ದೃಷ್ಟಿಯಿಂದ ಸರಕಾರಗಳು ಮಹತ್ ಯೋಜನೆಗಳ ಆಶ್ವಾಸನೆಗಳನ್ನಿತ್ತು ವಂಚಿಸುತ್ತಿರುವುದಕ್ಕೆ ನಿದರ್ಶನಾಗಿ ಕಾಸರಗೋಡು ವೈದ್ಯಕೀಯ ಕಾಲೇಜು ಎಂಬ ಮಹಾ ಕನಸಿನ ಸೌಧ ಅಣಕಿಸುತ್ತಿದೆ. ಭಾಷಾವಾರು ಪ್ರಾಂತ್ಯ ವಿಂಗಡನೆಗೊಂಡು 58 ವರ್ಷಗಳು ಸಂದಿದ್ದು, ಜಿಲ್ಲೆಯ ಅಭಿವೃದ್ದಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗಿ ಬರುತ್ತಿರುವ ಎರಡು ಪ್ರಮುಖ ಪಕ್ಷಗಳು ವಂಚಿಸಿ ಹಿಪ್ಪೆಗೊಳಿಸಿ ಸಾಮಾನ್ಯ ಜನರ ಸಂಕಷ್ಟಗಳನ್ನು ಗಮನಿಸದಿರುವಂತೆ ನಟಿಸುತ್ತಿದೆ.

2013 ನವಂಬರ್ 30ರಂದು ರಾಜ್ಯ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕಾಸರಗೋಡು ವೈದ್ಯಕೀಯ ಕಾಲೇಜಿನ ನಿರ್ಮಾಣಕ್ಕೆ ಬದಿಯಡ್ಕ ಸಮೀಪದ ಉಕ್ಕಿನಡ್ಕದಲ್ಲಿ ಶಿಲಾನ್ಯಾಸಗೈದಿದ್ದರು. ಯೋಜನೆಯ ಪ್ರಥಮ ಹಂತದಲ್ಲಿ 1 ಕೋಟಿ ರು. ಮಂಜೂರುಗೊಳಿಸಿ ಆರಂಭಿಕ ಕೆಲಸಗಳಾದ ರಸ್ತೆ ನಿರ್ಮಾಣ ಮಾಡಲಾಗಿದ್ದು, ಇದು ಆರಂಭದ ಮುಂಗಾರು ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಬಳಿಕ ಯಾವುದೇ ಚಟುವಟಿಕೆಗಳು ಇಲ್ಲಿ ನಡೆದಿರಲಿಲ್ಲ. ಈ ಬಗ್ಗೆ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ.

ಎಣ್ಮಕಜೆ ಗ್ರಾಮ ಪಂಚಾಯತ್ನ ಪಡ್ರೆ ಗ್ರಾಮದ ಸ್ವರ್ಗ, ಕಜಂಪಾಡಿ ಸಹಿತ ಕುಂಬ್ಡಾಜೆ ಗ್ರಾಮ ಪಂಚಾಯತ್, ಬೆಳ್ಳೂರು ಗ್ರಾಮ ಪಂಚಾಯತ್, ಬದಿಯಡ್ಕ, ಪುತ್ತಿಗೆ ಮೊದಲಾದವುಗಳು ಕಳೆದ ದಶಕದಲ್ಲಿ ಎಂಡೋಸಲ್ಫಾನ್ ನ ಕರಾಳ ಮುಖ ದರ್ಶನವನ್ನು ರಾಷ್ಟ್ರಾದ್ಯಂತ ಸೃಷ್ಟಿಸಿ ಗಲಿಬಿಲಿಗೊಳಿಸಿದ ಘಟನೆಯ ಮುಂದುವರಿದು ಇದೀಗಲೂ ಆ ಪ್ರದೇಶಗಳಲ್ಲಿ ಎಂಡೋ ಸಂತ್ರಸ್ಥರ ರೋಧನ ಮುಂದುವರಿಯುತ್ತಿರುವಾಗ ಅದನ್ನು ಕೇಂದ್ರೀಕರಿಸಿ ವೈದ್ಯಕೀಯ ಕಾಲೇಜು ನಿರ್ಮಾಣದ ಭಾರೀ ಯೋಜನೆಯಿರಿಸಿದ್ದು ಬೆಳಕಿಂಡಿಯಂತೆ ಬಿಂಬಿಸಲ್ಪಟ್ಟಿತ್ತು. ಇದರನ್ವಯ 2013ರ ನವಂಬರ್ 30ರಂದು ರಾಜ್ಯದ ಮುಖ್ಯಮಂತ್ರಿಗಳು ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನಿಗದಿಗೊಳಿಸಿದ 63 ಎಕ್ರೆ ಸ್ಥಳದಲ್ಲಿ ಆರೋಗ್ಯ ಸಚಿವ, ಹಣಕಾಸು ಸಚಿವವರ ಸಮಕ್ಷಮ ಅದ್ದೂರಿಯ ಶಂಕುಸ್ಥಾಪನೆ ನೆರವೇರಿಸಿದ್ದರು.

ಒಟ್ಟು ವೈದ್ಯಕೀಯ ಕಾಲೇಜು ನಿರ್ಮಾಣ ಯೋಜನೆಗೆ 382 ಕೋಟಿ ರು. ಗಳ ಅಂದಾಜು ವೆಚ್ಚ ನಿಗದಿಗೊಳಿಸಲಾಗಿತ್ತು. ಈ ಪೈಕಿ 282 ಕೋಟಿ ರು.ಗಳನ್ನು ನಬಾರ್ಡ್ ನಿಂದ ಸಾಲ ರೂಪವಾಗಿ ಪಡೆದು ಕಾಮಗಾರಿ ಆರಂಭಿಸಲು ಯೋಜನೆಯ ಶಂಕುಸ್ಥಾಪನೆಯ ದಿನ ಘೋಷಿಸಲಾಗಿತ್ತು. ಮೊದಲ ಹಂತದಲ್ಲಿ 170 ಕೋಟಿ ರೂ ಬಿಡುಗಡೆಗೊಳಿಸಿ ಪ್ರಾಥಮಿಕ ಕಾಮಗಾರಿ ನಡೆಸುವುದೆಂದೂ ಅಂದು ಮುಖ್ಯಮಂತ್ರಿ ತಿಳಿಸಿದ್ದರು. ಆದರೆ ಮಾರ್ಚ್ ತಿಂಗಳಾದರೂ ಯಾವುದೇ ಕಾಮಗಾರಿ ಆರಂಭಗೊಳ್ಳದಿರುವುದರಿಂದ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಾರ್ವಜನಿಕರ ಕ್ರೀಯಾ ಸಮಿತಿ ರಚಿಸಲು ಪಂಚಾಯತ್ ಸರ್ವಪಕ್ಷ ಸಭೆ ತೀರ್ಮಾನಿಸಿತ್ತು.

ಚಳವಳಿಯ ಮೊದಲ ಹಂತವಾಗಿ ಮುಖ್ಯಮಂತ್ರಿ, ಆರೋಗ್ಯ ಮಂತ್ರಿ ಹಾಗೂ ರಾಜ್ಯ ಹಣಕಾಸು ಸಚಿವರನ್ನು ಕ್ರೀಯಾ ಸಮಿತಿಯ ತಂಡವು ಮುಖತಃ ಭೇಟಿ ನೀಡಿ ಮನವಿಯನ್ನು ನೀಡಿತು. ರಾಜ್ಯ ಸರಕಾರವು ನಬಾರ್ಡ್ ಗೆ ತಕ್ಕ ಸಮಯದಲ್ಲಿ ಯೋಜನೆಯ ವರದಿಯನ್ನು ನೀಡದಿರುವುದರಿಂದ ನಬಾರ್ಡ್ ಆರ್ಥಿಕ ಸಹಕಾರ ಸಿಗಲು ವಿಳಂಬವಾಗಿದ್ದು, ಆದರೆ 2014-15ರ ಆರ್ಥಿಕ ವರ್ಷದ ರಾಜ್ಯ ಮುಂಗಡ ಪತ್ರದಲ್ಲಿ 2.5 ಕೋಟಿ ರು. ಯೋಜನಾ ಮೊತ್ತ ಮೀಸಲಿರಿಸಿದ್ದರೂ ಕೂಡ ಅದು ಕಡಿತಗೊಳ್ಳುವುದರಿಂದ ಇನ್ನೂ 2.5 ಕೋಟಿ ರು. ಮೀಸಲಿರಿಸಬೇಕಾದ ಆವಶ್ಯಕತೆ ಇದೆ. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನಿಧಿ ಸಾಕಾಗದ ಸ್ಥಿತಿ ಈಗ ಇದೆ. 300 ಹಾಸಿಗೆಗಳಿರುವ ಆಸ್ಪತ್ರೆ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಚಿಕಿತ್ಸೆಗಿರುವ ಮತ್ತೊಂದು ಆಸ್ಪತ್ರೆ, ಕಾಲೇಜು ಲೈಬ್ರರಿ, ಪ್ರಯೋಗಾಲಯ, ವಿದ್ಯಾರ್ಥಿ ನಿಲಯ, ವಾಚನಾಲಯ, ಆಟದ ಮೈದಾನ, ನೀರಾವರಿ ಸೌಕರ್ಯ ಮೊದಲಾದವುಗಳನ್ನು ನಿರ್ಮಿಸಲು 300 ಕೋಟಿ ರು.ಗಳಾದರೂ ಅಂದಾಜು ವೆಚ್ಚ ನಿರೀಕ್ಷಿಸಿರುವುದಾಗಿ ಯೋಜನೆಯ ಪ್ರಮುಖ ಅಧಿಕಾರಿ ಡಾ.ಪಿ.ಜಿ.ಆರ್. ಪಿಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಲ್ಲದೆ ಮಾಲಿನ್ಯ-ತ್ಯಾಜ್ಯ ಸಂಸ್ಕರಣೆಯ ಸವಾಲನ್ನು ಎದುರಿಸಬೇಕಾದ ಅನಿವಾರ್ಯತೆಯೂ ಇದೆ. ಎಂಡೋ ಪೀಡಿತ ವ್ಯಾಪ್ತಿಯ ಪ್ರದೇಶವಾಗಿರುವುದರಿಂದ ಅದನ್ನು ದೃಷ್ಟಿಯಲ್ಲಿರಿಸಿ ವೈದ್ಯಕೀಯ ಕಾಲೇಜಿನ ಯೋಜನೆ ತಯಾರಿಸಲಾಗಿತ್ತು ಎನ್ನುವುದು ಗಮನಾರ್ಹ. 2015 ರಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪ್ರಥಮ ತಂಡ ಆರಂಭಗೊಂಡು 2018ರಲ್ಲಿ ಕಾಲೇಜು ನಿರ್ಮಾಣವು ಪೂರ್ಣಗೊಳಿಸಲಾಗುವುದೆಂದು ಘೋಷಿಸಲಾಗಿತ್ತು.

ಆದರೆ ಕ್ರೀಯಾ ಸಮಿತಿಯ ಹೋರಾಟಕ್ಕೆ ತಕ್ಕ ಬೆಲೆ ಸಿಗದಿದ್ದರಿಂದ ಅದರ ಹೋರಾಟವನ್ನು ಇದೀಗ ಮತ್ತಷ್ಟು ಬಲಪಡಿಸಿ 1 ಲಕ್ಷ ಜನರ ಸಹಿಸಹಿತ ಇತರ ಹೋರಾಟಗಳಿಗೆ ರೂಪ ನೀಡಲಾಗಿದೆ.

ಸರ್ವ ಪಕ್ಷಗಳ ಒಗ್ಗಟ್ಟಿನ ಕ್ರೀಯಾ ಸಮಿತಿಯ ಪ್ರತಿಭಟನಾ ಹೋರಾಟಕ್ಕೆ ಮಣಿದ ರಾಜ್ಯ ಮುಖ್ಯಮಂತ್ರಿ 30 ಕೋಟಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದರೂ, ಈ ವರೆಗೆ ಆಡಳಿತಾನುಮತಿ ದೊರಕದೆ ಆ ಭರವಸೆಯೂ ಹಳ್ಳ ಹಿಡಿಯುವ ಸೂಚನೆ ಇರುವುದರಿಂದ ಕ್ರೀಯಾ ಸಮಿತಿಯು ಹೋರಾಟವನ್ನು ತೀವ್ರಗೊಳಿಸಿ ಮುಂದಿನ ಜನವರಿಂದ ಕಾಮಗಾರಿ ಆರಂಭಿಸುವಂತೆ ಒತ್ತಡ ಹೇರುತ್ತಿದೆ. ಈ ನಡುವೆ ಡಿ.4ರಂದು ಕ್ರೀಯಾ ಸಮಿತಿಯು ತಿರುವನಂತಪುರದ ರಾಜಭವನದ ಎದುರು ಧರಣಿ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸಲು ತೀರ್ಮಾನಿಸಿದೆ.

ಕಳೆದ ವರ್ಷ ಶಿಲಾನ್ಯಾಸಗೈದ ನಾಮ ಫಲಕವನ್ನು ಹುಡುಕಾಡಲು ಹೊರಟಾಗ ಆ ಶಿಲಾಫಲಕವು ಬದಿಯಡ್ಕ ಗ್ರಾಮ ಪಂಚಾಯತ್ ಕಚೇರಿಯೊಳಗೆ ಕಂಡುಬಂದಿದ್ದು, ನೋಡಿ ಅಣಕಿಸುವಂತಿತ್ತು.

ಈ ಬಗ್ಗೆ ಹೋರಾಟ ಕ್ರೀಯಾ ಸಮಿತಿಯ ಅಧ್ಯಕ್ಷ ಮಾಹಿನ್ ಕೇಳೊಟ್ ಅವರನ್ನು ಮಾತನಾಡಿಸಿದಾಗ, ಕಾಸರಗೋಡು ಜಿಲ್ಲೆಯನ್ನು ಸರಕಾರ ಈ ಹಿಂದಿನಂತೆ ವಂಚಿಸುತ್ತಿರುವುದನ್ನು ಇಲ್ಲೂ ಮುಂದುವರಿಸಿದೆ. ಇದಕ್ಕೆ ಸರ್ವ ಪಕ್ಷಗಳ ನೇತೃತ್ವದಲ್ಲಿ ನಾವೀಗ ಹೋರಾಟ ಬಿಗಿಗೊಳಿಸಿ ವೈದ್ಯಕೀಯ ಕಾಲೇಜು ನಿರ್ಮಾಣವನ್ನು ಸಾಕಾರಗೊಳಿಸಲಿದ್ದೇವೆ ಎಂದು ತಿಳಿಸಿದರು.

ಚಿತ್ರದಲ್ಲಿ: ಬದಿಯಡ್ಕ ಗ್ರಾಮ ಪಂಚಾಯತ್ ಕಚೇರಿಯೊಳಗೆ ತಂದಿರಿಸಲಾಗಿರುವ ಶಂಕುಸ್ಥಾಪನೆಯ ಶಿಲಾಫಲಕ.

Leave a Reply

Your email address will not be published. Required fields are marked *