Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಕುಡಿಯುವ ನೀರಿನ ಟ್ಯಾಂಕ್ ಕಾಡಿನಿಂದ ಆವೃತ: ಇಲ್ಲಿ ಕೂಸಿಗಿಂತ ಮೊದಲೇ ಕುಲಾವಿ ನಿರ್ಮಿಸಿದರು- ಕಾಲನಿ ನಿವಾಸಿಗಳ ಸಂಕಷ್ಟಕ್ಕೆ ಕೊನೆಯಿಲ್ಲ !

ಪೆರ್ಲ(ಕಾಸರಗೋಡು): ಕುಡಿಯುವ ಶುದ್ದ ಜಲ ವಿತರಣೆ ಹಾಗೂ ಕೃಷಿ ಅಭಿವೃದ್ದಿಗಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ರೂಪಿಸಿದ ಬೃಹತ್ ವೆಚ್ಚದ ಯೋಜನೆಯೊಂದು ಯಾವುದೇ ಪ್ರಯೋಜನವಿಲ್ಲದೆ ಕಾಡುಸುತ್ತಿ ಶಾಪ ಮೋಕ್ಷಕ್ಕಾಗಿ ಕಾಯುತ್ತಿರುವುದು ಯಾರ ಕಣ್ಣಿಗೂ ಕಾಣದೆ ಮೂಲೆಗುಂಪಾಗಿರುವುದು ತಡವಾಗಿ ಕಂಡುಬಂದಿದೆ.

ಎಣ್ಮಕಜೆ ಗ್ರಾಮ ಪಂಚಾಯತ್ನ ಕಜಂಪಾಡಿ ಪರಿಶಿಷ್ಟ ಜಾತಿ ಕಾಲನಿಯ ಸಮೀಪ ಹಿಂದೂ ರುದ್ರಭೂಮಿಗೆ ಮೀಸಲಿರಿಸಿದ ಒಂದು ಎಕ್ರೆ 62 ಸೆಂಟ್ಸ್ ನಿವೇಶನದ ಪಕ್ಕದ ಬೃಹತ್ ಗುಡ್ಡದ ಒಂದು ಪಾರ್ಶ್ವದಲ್ಲಿ 6 ಲಕ್ಷ ರು.ಗಳ ಟ್ಯಾಂಕ್ ಒಂದನ್ನು ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ.

2008-09 ಆರ್ಥಿಕ ವರ್ಷದಲ್ಲಿ ಕೇರಳ ಸರಕಾರದ ಐಡಬ್ಲುಎಲ್ಪಿ ಯೋಜನೆಯು ಪರಿಶಿಷ್ಟ ಜಾತಿಯ ಕಾಲನಿಯ ಕೃಷಿ ಹಾಗೂ ಕುಡಿಯುವ ನೀರಿನ ಆವಶ್ಯಕತೆ ಪೂರೈಕೆಗೆ ಕಿರು ನೀರಾವರಿ ಯೋಜನೆಯ ಅನ್ವಯ ಐಡಬ್ಲುಎಲ್ಪಿ ಬೃಹತ್ ಯೋಜನೆಗೆ ಅನುದಾನ ಮಂಜೂರು ಮಾಡಿತ್ತು. ಗುಡ್ಡದ ಕೆಳ ಭಾಗದಲ್ಲಿ ಕೊಳವೆ ಬಾವಿಯೊಂದನ್ನು ನಿರ್ಮಿಸಿ ಪೈಪ್ ಲೈನ್ ಅಳವಡಿಸಿ ಜಲ ಸರಬರಾಜಿಗೆ ಯೋಜನೆಯಲ್ಲಿ ತೀರ್ಮಾನಿಸಲಾಗಿತ್ತು.

ಕೂಸಿಗಿಂತ ಮೊದಲೇ ಕುಲಾವಿಯೆಂದಂತೆ, ಜಲ ಮೂಲವನ್ನು ನಿರ್ಮಿಸುವ ಮೊದಲಾಗಿ ಗುಡ್ಡದ ಪಾಶ್ರ್ವವೊಂದರಲ್ಲಿ ಸುಮಾರು 10 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ವೊಂದನ್ನು ನಿರ್ಮಿಸಿ, ಬಳಿಕ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಲಕ್ಷಾಂತರ ರು.ಗಳನ್ನು ಪೋಲು ಮಾಡಲಾಗಿದೆ.

ಟ್ಯಾಂಕ್ ನಿರ್ಮಿಸಿ ಖಾಲಿ ಬಿಟ್ಟಿರುವುದರಿಂದ ಇದೀಗ ಟ್ಯಾಂಕ್ ಸುತ್ತಲೂ ಪೊದೆಗಳು ಆವರಿಸಿ ಕುಸಿಯುವ ಭೀತಿಯಲ್ಲಿದೆ. ಟ್ಯಾಂಕ್ ರಚನೆಯ ಬಳಿಕ ಕೊಳವೆ ಬಾವಿಯೊಂದನ್ನು ನಿರ್ಮಿಸಲಾಗಿದ್ದರೂ, ಅಲ್ಲಿ ನೀರು ದೊರಕದಿರುವುದರಿಂದ ಅಲ್ಲೇ ಕೈಬಿಡಲಾಯಿತೆಂದು ತಿಳಿದುಬಂದಿದೆ. ಜೊತೆಗೆ ಪಿವಿಸಿ ಪೈಪ್ ಮತ್ತು ಕೊಳವೆ ಬಾವಿಗೆ ಅಳವಡಿಸಿದ ಕಬ್ಬಿಣದ ಪೈಪ್ ಇದೀಗ ತುಕ್ಕು ಹಿಡಿದು ನಶಿಸಿ ಹೋಗುತ್ತಿದೆ.

ಕಜಂಪಾಡಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ 43 ಕುಟುಂಬಗಳು ವಾಸಿಸುತ್ತಿದ್ದು ನಿತ್ಯ ಬಳಕೆಯ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈ ಕಾಲನಿಗೆ ತೆರಳುವಲ್ಲಿ ಮತ್ತೊಂದು ಕೊಳವೆ ಬಾವಿ ಕೂಡಾ ನೀರಿಲ್ಲದೆ ಉಪಯೋಗ ಶೂನ್ಯವಾಗಿದೆ. ರಸ್ತೆ ಮತ್ತು ಮೂಲ ಸೌಕರ್ಯಗಳಿಂದ ವಂಚಿತವಾದ ಈ ಕಾಲನಿಯ ಜನರು ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಒಂದೆಡೆ ವಿಶಾಲವಾಗಿ ಆವರಿಸಿರುವ ರಬ್ಬರ್ ಕಾಡುಗಳು ಮತ್ತು ಮತ್ತೊಂದೆಡೆ ವ್ಯಾಪಿಸಿರುವ ಗುಡ್ಡಗಳ ಮಧ್ಯೆ ವಾಸಿಸುವ ಇಲ್ಲಿಯ ಸಾಮಾನ್ಯ ನಿವಾಸಿಗಳು ಹೊಸ ಪ್ರಪಂಚಕ್ಕೆ ತೆರದುಕೊಳ್ಳದೆ ಪರಿತಪಿಸುತ್ತಿದ್ದಾರೆ.

ಕಾಲನಿ ಪಕ್ಕದಲ್ಲಿ ವರ್ಷಗಳ ಹಿಂದೆ ಕುಟುಂಬ ಕ್ಷೇಮ ಉಪ ಕೇಂದ್ರವೊಂದನ್ನು ಆರಂಭಿಸಲು ಕಟ್ಟಡದ ಕಾಮಗಾರಿಗೆ ತೊಡಗಿ, ಬಳಿಕ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಯೋಜನಾ ಮೊತ್ತದ ಬಿಲ್ಲು ಪಡೆದು ಅರ್ಧದಲ್ಲಿ ಕೈಬಿಟ್ಟಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.

ಪರಿಶಿಷ್ಟಜಾತಿ ಅಭಿವೃದ್ದಿ ಇಲಾಖೆ ಪ್ರತಿವರ್ಷ ಲಕ್ಷಾಂತರ ರು.ಗಳ ಮೂಲಕ ಕಾಲನಿಗಳ ಅಭಿವೃದ್ದಿಯ ಮಂತ್ರ ಪಠಿಸುತ್ತಿದ್ದರೂ, ಈ ಕಾಲನಿಯಲ್ಲಿ ಈಗಲೂ ಒಂದೆರಡು ಗುಡಿಸಲುಗಳಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಲ್ಲಿದೆ. ಪರಿಶಿಷ್ಟ ಜಾತಿ ವಿಭಾಗದವರ ಕ್ಷೇಮಾಭಿವೃದ್ದಿ ಕೆಲಸಗಳಲ್ಲಿ ಸ್ವಯಂ ಭಾಗಿಯಾಗಿ ಕರ್ತವ್ಯ ನಿರ್ವಹಿಸುವ ಗ್ರಾಮ ಪಂಚಾಯತ್ ಆಡಳಿತ ಪಕ್ಷದ ನಿಷ್ಠಾವಂತ ಕಾರ್ಯಕರ್ತನೋರ್ವನ ಮನೆ ಇದೀಗಲೂ ಗುಡಿಸಲೇ ಆಗಿರುವುದು ದೌರ್ಭಾಗ್ಯಕರ.

ಕುಡಿಯುವ ನೀರು ಯೋಜನೆಯ ಬಗ್ಗೆ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅಲ್ಲಿಯ ನೀರಿನ ಲಭ್ಯತೆಯ ಕೊರತೆ ಹಾಗೂ ಲಭ್ಯತೆಯಿರುವಲ್ಲಿ ಖಾಸಗೀ ವ್ಯಕ್ತಿಯೋರ್ವರು ಅನುಮತಿ ನೀಡದಿರುವುದರಿಂದ ಎಣ್ಮಕಜೆ ಗ್ರಾಮ ಪಂಚಾಯತ್ನ ಗಡಿ ಪ್ರದೇಶ ಪುತ್ರಕಳದಲ್ಲಿ ಕೊಳವೆ ಬಾವಿ ನಿರ್ಮಿಸಿ ನೀರು ಸರಬರಾಜಿಗೆ ಗ್ರಾಮ ಪಂಚಾಯತ್ ಯೋಜನೆಯಲ್ಲಿ ನಿಧಿ ಮೀಸಲಿಡಲಾಗಿದೆಯೆಂದು ತಿಳಿಸಿದ್ದಾರೆ.

ಚಿತ್ರದಲ್ಲಿ: ಗುಡ್ಡದ ಪಾಶ್ರ್ವದಲ್ಲಿ ಕಾಡಿನಿಂದ ಆವೃತವಾದ ಟ್ಯಾಂಕ್.

Leave a Reply

Your email address will not be published. Required fields are marked *