Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೊದಲ ಮಹಡಿ ನಿರ್ಮಾಣದ ಹೆಸರಿನಲ್ಲಿ ರೆಡ್ ಕ್ರಾಸ್ ಸೊಸೈಟಿಯಿಂದ 11 ಲಕ್ಷ ರು. ಗೋಲ್ ಮಾಲ್ !

ತನಿಖಾ ವರದಿ: ಶ್ರೀರಾಮ ದಿವಾಣ.

ಉಡುಪಿ: ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯು ಉಡುಪಿಯ ಅಜ್ಜರಕಾಡು ಬಳಿಯ ನಾಯರ್ ಕೆರೆಯಲ್ಲಿರುವ ರೆಡ್ ಕ್ರಾಸ್ ಭವನ ಕಟ್ಟಡದಲ್ಲಿ ಮೊದಲ ಮಹಡಿ ನಿರ್ಮಿಸುವ ಹೆಸರಲ್ಲಿ ರಾಜ್ಯ ಸರಕಾರವು ಬಿಡುಗಡೆಗೊಳಿಸಿದ 11 ಲಕ್ಷ ರು. ಗಳ ಸಹಾಯಧನದಲ್ಲಿ ಮೊದಲ ಮಹಡಿಯನ್ನು ನಿರ್ಮಿಸುವ ಮೂಲಕ ಸದ್ವಿನಿಯೋಗ ಮಾಡದೆ ದುರುಪಯೋಗಪಡಿಸಿರುವುದು ತಡವಾಗಿ ಬೆಳಕಿಗೆಬಂದಿದೆ.

redcross bhavan udupi copy

* ಮೊದಲ ಮಹಡಿ ನಿರ್ಮಾಣವಾಗಿಲ್ಲ ಎನ್ನುವುದಕ್ಕೆ ಈ ಫೋಟೋವೇ ಸಾಕ್ಷಿ !

ರೆಡ್ ಕ್ರಾಸ್ ಸೊಸೈಟಿಯ ರಾಜ್ಯಾಧ್ಯಕ್ಷರೂ ಆಗಿರುವ ಕರ್ನಾಟಕ ರಾಜ್ಯಪಾಲರು 2010ರಲ್ಲಿ ಉಡುಪಿಯ ನೂತನ ರೆಡ್ ಕ್ರಾಸ್ ಭವನವನ್ನು ಉದ್ಘಾಟಿಸಿದ್ದರು. 2012-13ರಲ್ಲಿ ರೆಡ್ ಕ್ರಾಸ್ ಭವನದ ನೆಲ ಮಹಡಿಯ ಮೇಲೆ ಮೊದಲ ಮಹಡಿ ನಿರ್ಮಿಸುವ ಸಲುವಾಗಿ 36 ಲಕ್ಷ ರು.ಗಳನ್ನು ಸಹಾಯಧನವಾಗಿ ಮಂಜೂರು ಮಾಡಬೇಕು ಎಂದು ಕೋರಿ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿಯವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ರೆಡ್ ಕ್ರಾಸ್ ಸೊಸೈಟಿಯ ಕೋರಿಕೆಯನ್ನು ಮನ್ನಿಸಿದ ಸರಕಾರ ಮೊದಲ ಹಂತವಾಗಿ 2012-2013ನೇ ಸಾಲಿನಲ್ಲಿ 6 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿತ್ತು. 2013-14ನೇ ಸಾಲಿನಲ್ಲಿ 5 ಲಕ್ಷ ರು.ಗಳನ್ನು ಸಹಾಯಧನವಾಗಿ ಬಿಡುಗಡೆಗೊಳಿಸಿದೆ.

redcross buliding

* ಸರಕಾರ 11 ಲಕ್ಷ ರು. ಬಿಡುಗಡೆಗೊಳಿಸಿರುವುದಕ್ಕೆ ಈ ಕಡತವೇ ಸಾಕ್ಷಿ !

ಕಳೆದ ಎರಡು ವರ್ಷಗಳಲ್ಲಿ ಒಟ್ಟು 11 ಲಕ್ಷ ರು.ಗಳನ್ನು ಪಡೆದುಕೊಂಡಿರುವ ಉಡುಪಿ ರೆಡ್ ಕ್ರಾಸ್ ಸೊಸೈಟಿಯು ಇದುವರೆಗೂ ಮೊದಲ ಮಹಡಿಯನ್ನು ನಿರ್ಮಿಸದೆ ಆರ್ಥಿಕ ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ. 11 ಲಕ್ಷ ರು.ಗಳನ್ನು ಮಂಜೂರು ಮಾಡಿದ ಸರಕಾರದ ಉನ್ನತ ಅಧಿಕಾರಿಗಳಾಗಲೀ, ಈ ಅವಧಿಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರೂ ಆಗಿದ್ದ ಜಿಲ್ಲಾಧಿಕಾರಿಗಳಾದ ಡಾ.ಎಂ.ಟಿ.ರೇಜು ಅವರಾಗಲೀ ಈ ಬಗ್ಗೆ ಕನಿಷ್ಟ ಪರಿಶೀಲನೆಯನ್ನೂ ನಡೆಸದಿರುವುದು ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.

dr.m.te.reju ias

* 2013 ರವರೆಗೂ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾದ್ಯಕ್ಷರೂ, ಜಿಲ್ಲಾಧಿಕಾರಿಗಳೂ, ಬಸ್ರೂರು ಅವರ ಆಪ್ತರೇ ಆಗಿದ್ದ ಡಾ.ಎಂ.ಟಿ.ರೆಜು !

2012-13ನೇ ಸಾಲಿನಲ್ಲಿ ಸರಕಾರ ಬಿಡುಗಡೆಗೊಳಿಸಿದ 5 ಲಕ್ಷ ರು. ಮತ್ತು 2013-14ನೇ ಸಾಲಿನಲ್ಲಿ ಬಿಡುಗಡೆಗೊಳಿಸಿದ 6 ಲಕ್ಷ ರು. ಗಳನ್ನು ಉಪಯೋಗಿಸಿಕೊಂಡು ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿಯಾಗಿರುವ ಬಸ್ರೂರು ರಾಜೀವ್ ಶೆಟ್ಟಿಯವರ ನೇತೃತ್ವದ ಸಮಿತಿಯು ಇದುವರೆಗೂ ಯಾಕಾಗಿ ಕಟ್ಟಡ ನಿರ್ಮಿಸುವ ಕನಿಷ್ಟ ಕೆಲಸಕ್ಕೆ ಕೈಹಾಕಿಲ್ಲ, ಮೊದಲ ಮಹಡಿ ನಿರ್ಮಿಸಲೆಂದು ಸರಕಾರ ಬಿಡುಗಡೆಗೊಳಿಸಿದ 11 ಲಕ್ಷ ರು.ಗಳನ್ನು ಬಸ್ರೂರು ರಾಜೀವ್ ಶೆಟ್ಟಿಯವರು ಸೊಸೈಟಿಯ ಅಧಿಕೃತ ಉಳಿತಾಯ ಖಾತೆಯಲ್ಲಿಯೇ ತೆಗೆದಿರಿಸಿದ್ದಾರಾ ? ಇಲ್ಲವೇ ಖಸಗಿ ವ್ಯಕ್ತಿಗಳ ಹೆಸರಿನಲ್ಲಿರುವ ಉಳಿತಾಯ ಖಾತೆಯಲ್ಲಿರಿಸಿ ಅದರಿಂದ ಬರುವ ಬಡ್ಡಿ ಹಣವನ್ನು ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಂಡು ಗೋಲ್ ಮಾಲ್ ನಡೆಸುತ್ತಿದ್ದಾರಾ ಎಂಬಿತ್ಯಾದಿ ಸಹಜ ಪ್ರಶ್ನೆಗಳು ಈಗ ಉಂಟಾಗಿದ್ದು, ಇಲ್ಲೂ ಹಲವು ಶಂಕೆಗಳನ್ನು ಹುಟ್ಟುಹಾಕಿದೆ.

basrur rajeev shetty

* ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ.

2013-14ನೇ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನೂ ಉಳಿದಿರುವುದು ಕೇವಲ ನಾಲ್ಕೇ ನಾಲ್ಕು ತಿಂಗಳು. ಈ ನಾಲ್ಕು ತಿಂಗಳ ಅವಧಿಯಲ್ಲಿ, ರಾಜ್ಯ ಸರಕಾರ ತನ್ನ ಖಜಾನೆಯಿಂದ ಬಿಡುಗಡೆಗೊಳಿಸಿದ ಸಾರ್ವಜನಿಕರ ತೆರಿಗೆ ಹಣವನ್ನು ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯು ರೆಡ್ ಕ್ರಾಸ್ ಭವನದ ನೆಲ ಮಹಡಿಯ ಮೇಲೆ ಮೊದಲ ಮಹಡಿಯನ್ನು ನಿರ್ಮಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಕಾರಣ, ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿಯವರು ಈಗಾಗಲೇ ರೆಡ್ ಕ್ರಾಸ್ ಸೊಸೈಟಿಯ ಹೆಸರಿನಲ್ಲಿ ಅಂಬ್ಯುಲೆನ್ಸ್ ಹಗರಣ (ಅಂಬ್ಯಲೆನ್ಸ್ ಹಗರಣವನ್ನು udupibits.in ದಿನಾಂಕ 08.10.2014ರಂದು ಬಹಿರಂಗಪಡಿಸಿದೆ) ದ ಸಹಿತ ಇತರ ಅನೇಕ ಹಗರಣಗಳನ್ನು ನಡೆಸಿರುವುದು ಬಯಲಾಗಿದ್ದು, ಮೊದಲ ಮಹಡಿಯ ನಿರ್ಮಾಣ ಪ್ರಕ್ರಿಯೆಯೂ ಈ ಹಗರಣಗಳ ಸರಣಿ ಸಾಲಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬ ಅನುಮಾನ ಮೂಡುವಂತಿದೆ.

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ದಕ್ಷರು ಎಂದು ಹೇಳಲಾಗುತ್ತಿದ್ದು, ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾದ್ಯಕ್ಷರೂ ಆದ ಇವರಾದರೂ ಈ ಗೋಲ್ ಮಾಲ್ ಬಗ್ಗೆ ಗಮನ ಹರಿಸುವರಾ ಎಂದು ಕಾದುನೋಡಬೇಕು.

vishal ias

* ಉಡುಪಿ ರೆಡ್ ಕ್ರಾಸ್ ಸೊಸೈಟಿಯ ನೂತನ ಜಿಲ್ಲಾಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್.

 

Leave a Reply

Your email address will not be published. Required fields are marked *