Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಸ್ತೆ ಬದಿ ಸತ್ತು ಬಿದ್ದ ಕುಡುಕನನ್ನೂ ಮರಣೋತ್ತರ ಪರೀಕ್ಷೆ ಮಾಡದೆ ಸುಡುವುದಿಲ್ಲ, ಆದರೆ…!

* ಸಿಡಿಲು     * ಶ್ರೀಕಾಂತ್ ಶೆಟ್ಟಿ

shrikanth shetty-2 copy

# ನೆಹರು ತೀರಿ ಹೋದರು. ನಾನಲ್ಲದೆ ನಿಮಗೆ ಮತ್ಯಾರೂ ಸಮರ್ಥ ನಾಯಕ ಸಿಗಲು ಸಾಧ್ಯವಿಲ್ಲ ಎಂಬ ಮಾನಸೀಕತೆಯನ್ನು ಅವರು ಕಾಂಗ್ರೇಸಿಗರಲ್ಲಿ ಮೂಡಿಸಿದ್ದರು. ಅಂದಿನ ದೇಶದ ಇತಿಹಾಸ, ಚರಿತ್ರೆ, ಪ್ರಚಲಿತ ವಿದ್ಯಾಮಾನಗಳು ಎಲ್ಲವೂ ನೆಹರೂ ಕೇಂದ್ರಿತವಾಗಿ ರಚನೆಗೊಂಡಿದ್ದವು. ಹಾಗಾಗಿ ಕಾಂಗ್ರೇಸಿಗರಂತೆ ಇತರ ಒಂದಷ್ಟು ಜನರು ಕೂಡ ನೆಹರು ಸಾವನ್ನು ತಮ್ಮ ಸ್ವಂತ ಸಾವಿನಂತೆ ಪರಿಭಾವಿಸಿ ಮುರುಟಿ ಹೋದರು.

ನೆಹರು ನಂತರ ಯಾರು..? ಈ ಪ್ರಶ್ನೆ ಎಲ್ಲರನ್ನೂ ಕೊರೆಯತೊಡಗಿತು. ಈಗ ಅನಿಸುತ್ತದೆ. ಜನರೆಲ್ಲಾ ಸುಮ್ಮನೆ ತಲೆ ಹಾಳು ಮಾಡಿಕೊಂಡಿದ್ದರು. ಅದೊಂದು ಅರ್ಥಹೀನ ಪ್ರಶ್ನೆಯಾಗಿತ್ತು. ಕಾಂಗ್ರೇಸ್ ಪಕ್ಷದಲ್ಲಿ ನೆಹರುವಿಗಿಂತ ಮುತ್ಸದ್ದಿಗಳೂ, ಸಮರ್ಥ ಆಡಳಿತಗಾರರೂ, ಜನಪರ ಚಿಂತನೆ ಇದ್ದವರು ತುಂಬಾ ಜನ ಇದ್ದರು. ಆದರೆ ನೆಹರು ಅವರ ಅವದಿಯಲ್ಲಿ ಉದ್ದೇಶಪೂರ್ವಕವಾಗಿ ಅವರನ್ನು ಮಂಕುಗೊಳಿಸಲಾಗಿತ್ತು. ಹಾಗಾಗಿ ಕಾಂಗ್ರೇಸ್ ಪಕ್ಷ ಕುರುಡರ ನಾಡಿಗೆ ಒಕ್ಕಣ್ಣನೇ ಅರಸ ಎಂಬಂತೆ ನೆಹರು ಅವರನ್ನೇ ನೆಚ್ಚಿಕೊಂಡು ಸುಮ್ಮನಾಗಿತ್ತು.

neharu

* ನೆಹರೂ

ಆದರೆ ನೆಹರು ವಿರೋಧಿ ಅಲೆ ಇರಲೇ ಇಲ್ಲವೆಂದಲ್ಲ. ವಿರೋಧಿ ಅಲೆಯೂ ಇತ್ತು. ಅಧಿಕಾರಕ್ಕಾಗಿ ಪೈಪೋಟಿಯೂ ಇತ್ತು. ಆದರೆ ದೇಶ ಆಳುವುದರಲ್ಲಿ ನೆಹರುವಿಗೆ ಇಲ್ಲದ ಚಾಣಾಕ್ಯತೆ ಕುರ್ಚಿ ಉಳಿಸಿಕೊಳ್ಳುವುದರಲ್ಲಿ ತುಸು ಹೆಚ್ಚೇ ಇತ್ತು ಎನ್ನಬಹುದು. ಹಾಗಾಗಿ 16 ವರ್ಷದ ಅವರ ಆಳ್ವಿಕೆ ಯಾವುದೇ ಗೊಂದಲವಿಲ್ಲದೆ ನಡೆದು ಹೋಯಿತು.

1964ರಲ್ಲಿ ಗುಪ್ತರೋಗವೊಂದಕ್ಕೆ ಬಲಿಯಾದ ನೆಹರು ಅವರು ಸದ್ದಿಲ್ಲದೆ ಕುರ್ಚಿ ಖಾಲಿ ಮಾಡಿದರು. ಪ್ರದಾನಿ ಪಟ್ಟಕ್ಕೊಬ್ಬ ಅರ್ಹ ವ್ಯಕ್ತಿಯ ಅಗತ್ಯವಿತ್ತು. ಬಹುಸಂಖ್ಯಾತ ಸಮುದಾಯದ ವಿರೋಧ ಕಟ್ಟಿಕೊಂಡು ನೆಹರು ಅವಧಿಯಲ್ಲಿ ಜಾರಿ ಮಾಡಿದ್ದ ಹಿಂದೂ ಕೋಡ್ ಬಿಲ್, ದೇಶದ ಜನರನ್ನು ಭಾಷೆಯ ಆಧಾರದಲ್ಲಿ ಹಂಚಿಕೆ ಮಾಡಿದ ಭಾಷಾವಾರು ರಾಜ್ಯ ರಚನೆ, ನೆಹರು ಬೇಜವಾಬ್ದಾರಿಗೆ ತುಂಡಾದ ಕಾಶ್ಮೀರ, 62ರ ಯುದ್ದದಲ್ಲಿ ಚೀನಿಯರ ಮುಂದೆ ಹೀನಾಯ ಸೋಲು… ಈ ಎಲ್ಲಾ ಪಾಪದ ಮೂಟೆ ಕಾಂಗ್ರೇಸಿನ ಬೆನ್ನು ಏರಿದ್ದವು.

ಪ್ರಧಾನಿ ಕುರ್ಚಿಯನ್ನು ಹಾಗೇ ಖಾಲಿ ಬಿಡುವಂತಿಲ್ಲ. ಹಿರಿಯರಾದ ಗುಲ್ಜಾರಿಲಾಲ್ ನಂದಾ ಅವರನ್ನು ಸದ್ಯಕ್ಕೆ ಸ್ವಲ್ಪ ದಿನ ಇರಿ ಎಂದು ಪ್ರಧಾನಿ ಮಾಡಲಾಯಿತು. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಪಕ್ಕಾ ಪ್ರಧಾನಿ ಆಯ್ಕೆಗಾಗಿ ತಂತ್ರ ಕುತಂತ್ರಗಳು ತೆರೆ ಮರೆಯಲ್ಲಿ ನಡೆಯತೊಡಗಿದವು. ತೆರೆಮರೆಯ ಆಟಗಳು ಏನಿದ್ದರೂ ಅಂದಿನ ಕಾಂಗ್ರೇಸಿನಲ್ಲಿ ನಿರ್ಣಾಯಕರಾಗಿದ್ದವರು ಕೆ ಕಾಮ್ ರಾಜ್…. ಈ ಹೆಸರು ಇಂದಿನ ಬಹಳಷ್ಟು ಕಾಂಗ್ರೇಸಿಗರಿಗೆ ಗೊತ್ತಿರಲಿಕ್ಕಿಲ್ಲ.

gulzari lal nanda

* ಗುಲ್ಜಾರಿ ಲಾಲ್ ನಂದಾ

ಕಾಂಗ್ರೇಸ್ ಪಕ್ಷದ ಸಂಘಟನೆಗಾಗಿ ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಮರಾಜ್ ದಿಲ್ಲಿಗೆ ಬಂದಿದ್ದರು. ಕುರ್ಚಿಗಾಗಿ ಬಡಿದಾಡಿ ತಲೆ ಒಡೆದುಕೊಳ್ಳುವ ಇಂದಿನ ರಾಜಕೀಯ ಪುಡಾರಿಗಳಿಗಿಂತ ಕಾಮರಾಜ್ ಚಿಂತನೆ ತುಸು ಭಿನ್ನವಾದುದು. ಕಾಮರಾಜ್ ಅವರ ಈ ನಿಧರ್ಾರದಿಂದಾಗಿ ಆರು ಕೇಂದ್ರ ಸಚಿವರೂ ಸೇರಿದಂತೆ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷ ಸಂಘಟನೆಗೆ ಬರಬೇಕಾಯಿತು. ಅಧಿಕಾರವನ್ನು ತ್ಯಜಿಸಿ ಪಕ್ಷಕ್ಕಾಗಿ ದುಡಿಯುವ ಔದಾರ್ಯ ಮೆರೆಯುವ ಈ ಕ್ರಮಕ್ಕೆ ಕಾಮರಾಜ್ ಪ್ಲಾನ್ ಎಂದು ಕರೆಯಲಾಗುತ್ತದೆ.

ಕಾಮರಾಜ್ ಕಾಂಗ್ರೇಸಿನ ಅಧ್ಯಕ್ಷರಾಗಿದ್ದರು. ಪ್ರಧಾನಿ ಆಯ್ಕೆಯ ಚೆಂಡು ಕಾಮರಾಜ್ ಅಂಗಳಕ್ಕೆ ಬಂದು ಬಿದ್ದಿತ್ತು. ಕಾಮರಾಜ್ ಅತ್ಯಂತ ದೊಡ್ಡ ಅಗ್ನಿ ಪರೀಕ್ಷೆಯೊಂದಕ್ಕೆ ಸಿದ್ದವಾಗಬೇಕಿತ್ತು. ನೆಹರು ಅವರು ತೀರಿದ್ದಾರೆ, ಪಕ್ಷದಲ್ಲಿ ಆಂತರಿಕ ಕಚ್ಚಾಟ ಉಲ್ಬಣಿಸುತ್ತಿದೆ, ಜನ ಮಾನಸದಲ್ಲಿ ಕಾಂಗ್ರೇಸಿನ ಬಗ್ಗೆ ಸ್ವಾತಂತ್ರ ನಂತರದ ಮೊದಲ ಎರಡು ಅವಧಿಯಲ್ಲಿದ್ದ ಆಸಕ್ತಿ ಸಂಪೂರ್ಣವಾಗಿ ಕುಗ್ಗಿ ಹೋಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಅಯ್ಕೆ ಮಾಡುವುದೆಂದರೆ ಬಾಣಾಲೆಯಿಂದ ಬೆಂಕಿಗೆ ಹಾರಿದಂತೆ. ಪಕ್ಷದಲ್ಲಿ ಯಾರೋಬ್ಬರೂ ವಿರೋಧಿಸದ ವ್ಯಕ್ತಿಯೊಬ್ಬನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಅಂತ ವ್ಯಕ್ತಿ ಕಾಂಗ್ರೇಸಿನಲ್ಲಿ ಯಾರು..?

k.kamaraj

* ಕೆ.ಕಾಮರಾಜ್

ದಿಲ್ಲಿಯ ತ್ಯಾಗ ರಾಜ ಮಾರ್ಗದ ಹಳೇ ಬಂಗಲೆಯೊಂದರಲ್ಲಿ ಮುದಿ ಜೀವವೊಂದು ಧೀರ್ಘ ಆಲೋಚನೆಯಲ್ಲಿ ಮಗ್ನವಾಗಿತ್ತು. ಆ ಮುದಿಯನ ತಲೆಯಲ್ಲಿ ನಾನಾ ರೀತಿಯ ರಾಜಕೀಯ ಚದುರಂಗದ ನಡೆಗಳು ಮಿಂಚಿ ಮರೆಯಾಗುತ್ತಿದ್ದವು. ಹೆಸರು ಮೊರಾರ್ಜಿ ದೇಸಾಯಿ.. ಕಾಂಗ್ರೇಸಿನ ಹಿರಿಯ ನಾಯಕ.. ನೆಹರು ಸರಕಾರದಲ್ಲಿ ಆರ್ಥಿಕ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಅಷ್ಟೇ ಅಲ್ಲ ಗುಜರಾತ್ ಮತ್ತು ಮಹಾರಾಷ್ಟ್ರ ಒಂದೇ ಆಗಿದ್ದ ಸಂದರ್ಭದಲ್ಲಿ ಅದರ ಮುಖ್ಯಮಂತ್ರಿಯಾಗಿಯೂ ಅಧಿಕಾರವಹಿಸಿಕೊಂಡಿದ್ದರು.

ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಅಂದು ಮುಂಜಾನೆ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಲು ಹೊರಟರು. ಅದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಒಂದಷ್ಟು ಕಾಂಗ್ರೇಸಿಗರೊಂದಿಗೆ ಅವರು ಅತ್ಯಂತ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಹೊರಗಿದ್ದ ಒಂದೆರಡು ಕಾಂಗ್ರೇಸಿಗರು ಕುಲ್ದೀಪ್ ನಯ್ಯರ್ ಅವರನ್ನು ಅಡ್ಡಗಟ್ಟಿ, ನೀವು ಲಾಲ್ ಬಹಾದೂರ್ ಶಾಸ್ತ್ರಿ ಅವರಿಗೆ ಹೇಳಿ. ಅವರು ಪ್ರಧಾನಿಯಾಗುವ ಆಸೆ ಕಾಣುವ ಅಗತ್ಯ ಇಲ್ಲ ಎಂದು ಹೇಳಿ ಕಳುಹಿಸಿದರು.

ಒಟ್ಟಿನಲ್ಲಿ ರಾಜಕೀಯ ರಂಗೇರುತ್ತಿತ್ತು. ನೆಹರು ಬಿಟ್ಟು ಹೋದ ಅರಾಜಕ ಕಾಂಗ್ರೇಸಿನಲ್ಲಿ ಸದ್ದಿಲ್ಲದೆ ಬಿರುಕೊಂದು ತೆರೆದುಕೊಂಡಿತು. ಲಾಲ್ ಬಹಾದೂರ್ ಶಾಸ್ತ್ರಿ ಸ್ವಾತಂತ್ರ ಪೂರ್ವದಿಂದಲೂ ಕಾಂಗ್ರೇಸಿನಲ್ಲಿದ್ದವರು. ಆದರೆ ಎಂದೂ ಕೂಡ ಅಧಿಕಾರದ ಹಿಂದೆ ಹೋದವರಲ್ಲ. ನೆಹರು ಅವರು ತೀರಿಕೊಳ್ಳುವ ಕೆಲವು ಸಮಯ ಹಿಂದೆ ಶಾಸ್ತ್ರೀ ಅವರನ್ನು ತನ್ನ ಕ್ಯಾಬಿನೇಟಿಗೆ ಸೇರಿಸಿಕೊಂಡಿದ್ದರು. ಇದರಿಂದ ಶಾಸ್ತ್ರೀ ಅವರು ನೆಹರು ಉತ್ತರಾಧಿಕಾರಿಯಾಗಬಹುದು ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗಿತ್ತು. ಶಾಸ್ತ್ರೀ ತನ್ನ ಸರಳತೆಯಿಂದಾಗಿ ಇಡೀ ದೇಶದಲ್ಲೇ ಮನೆಮಾತಾಗಿದ್ದರು.

ಈ ಮದ್ಯೆ ಸ್ಪರ್ಧೆಯಲ್ಲಿ ಇನ್ನೊಂದು ಹೆಸರು ಕೇಳಿ ಬರತೊಡಗಿತು. ಇಂದಿರಾ ಗಾಂಧಿ… ನೆಹರು ವಂಶದ ಕುಡಿ.. ತೀಕ್ಷ್ಣ ಕಣ್ಣಿನ ನೀಳ ಮೂಗಿನ ಇಂದಿರಾ ತಾನು ಕೂಡ ಪ್ರಧಾನಿ ಪಟ್ಟದ ಆಕಾಂಕ್ಷಿ ಎಂಬ ಗಾಳಿ ಸುದ್ದಿಯನ್ನು ತೇಲಿ ಬಿಟ್ಟರು. ಶಾಸ್ತ್ರಿ ಅವರ ನಿರ್ಧಾರ ಸ್ಪಷ್ಟವಿತ್ತು. ಮೊರಾರ್ಜಿ ದೇಸಾಯಿಯೊಂದಿಗಾದರೆ ನಾನು ಸ್ಪರ್ಧಿಸುವೆ. ಆದರೆ ಇಂದಿರಾ ಗಾಂದಿ ಆಖಾಡಕ್ಕಿಳಿದರೆ ನಾನು ಕಣಕ್ಕಿಳಿಯಲಾರೆ ಎನ್ನುವುದು ಅವರ ನಿಲುವಾಗಿತ್ತು.

ಜಯಪ್ರಕಾಶ ನಾರಾಯಣರನ್ನು ಕಣಕ್ಕಿಳಿಸುವ ಬಗ್ಗೆಯೂ ಶಾಸ್ತ್ರಿ ಅವರಿಗೆ ಮನಸಿತ್ತು. ಈ ಮಾತನ್ನು ಕುಲ್ದೀಪ್ ನಯ್ಯರ್ ತನ್ನ ಆತ್ಮ ವೃತ್ತಾಂತದಲ್ಲಿ ದಾಖಲಿಸಿದ್ದಾರೆ. ಬೆಳ್ಳಂಬೆಳಗ್ಗೆ ಎದ್ದು ತನ್ನ ಮೂತ್ರವನ್ನು ತಾನೇ ಕುಡಿಯುತ್ತಿದ್ದ ಮೋರಾರ್ಜಿ ದೇಸಾಯಿ ಅತ್ಯಂತ ನಿಷ್ಟುರವಾದಿ ಮನುಷ್ಯ. ಉಡದ ಹಾಗೆ ತನ್ನ ನಿರ್ಧಾರಕ್ಕೆ ಅಂಟಿಕೊಂಡು ಕುಳಿತಿದ್ದರು ಅವರು. ಇಂದಿರಾ ಗಾಂದಿ ಮತ್ತು ಜಯಪ್ರಕಾಶ್ ನಾರಾಯಣ್ ಈ ಇಬ್ಬರ ಹೆಸರನ್ನೂ ಆ ವ್ಯಕ್ತಿ ಒಪ್ಪಿಕೊಳ್ಳಲಿಲ್ಲ. ಬದಲಾಗಿ ಯಾವುದೇ ಸ್ಪರ್ಧೆ ಬೇಡ ಎಂದಾದರೆ ನನ್ನನ್ನು ಆಯ್ಕೆ ಮಾಡುವುದೊಂದೇ ನಿಮಗೆ ಇರುವ ಅವಕಾಶ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು.

jayaprakash narayan

* ಜಯಪ್ರಕಾಶ್ ನಾರಾಯಣ್

ಕಾಂಗ್ರೇಸ್ ಚಿಂತಾಕ್ರಾಂತವಾಯಿತು. ಪ್ರಧಾನಿ ಕುರ್ಚಿಗಾಗಿ ಕಾಂಗ್ರೇಸಿಗರು ಕಿತ್ತಾಟದಲ್ಲಿ ತೊಡಗಿರುವುದು ಪತ್ರಿಕೆಗಳಲ್ಲಿ ಸುದ್ದಿಯಾಗತೊಡಗಿತು. ಅವಿರೋಧವಾಗಿ ಪ್ರಧಾನಿಯನ್ನು ಆಯ್ಕೆ ಮಾಡುವ ಕನಸು ಕೈಗೂಡುವಂತೆ ಕಾಣುತ್ತಿರಲಿಲ್ಲ. ಸಮಸ್ಯೆ ಒಂದೇ, ಮೊರಾರ್ಜಿ… ಆದರೆ ಮೊರಾರ್ಜಿ ದೇಸಾಯಿಗೆ ಇದ್ದ ವಿರೋಧವೇನು ಸಾಮಾನ್ಯದ್ದಲ್ಲ. ನೆಹರು ಅವರು ತೀರಿ ಹೋಗುವ ಮುನ್ನವೇ ಕಾಂಗ್ರೇಸಿನಲ್ಲಿ ಮೊರಾರ್ಜಿಯವರ ವಿರುದ್ದ ಒಂದು ತಂಡ ರಚನೆಯಾಗಿತ್ತು. ಕಾಮರಾಜ್ ನೇತೃತ್ವದ ಹಿಂದಿಯೇತರ ಕಾಂಗ್ರೇಸ್ ನಾಯಕರ ಒಂದು ಒಕ್ಕೂಟವಿತ್ತು. ಇದರಲ್ಲಿ ಸಂಜೀವ ರೆಡ್ಡಿ, ನಿಜಲಿಂಗಪ್ಪ, ಅತುಲ್ಯ ಘೋಷ್, ಎಸ್.ಕೆ.ಪಾಟೀಲ್ ಮೊದಲಾದ ದಿಗ್ಗಜ ನಾಯಕರಿದ್ದರು. ಈ ಒಕ್ಕೂಟವನ್ನು ಸಿಂಡಿಕೇಟ್ ಎಂದು ಕರೆಯಲಾಗುತ್ತಿತ್ತು. ಈ ಸಿಂಡಿಕೇಟ್ ಕಾಂಗ್ರೇಸಿನ ಒಟ್ಟು ಹಣೆಬರಹವನ್ನು ನಿರ್ಧರಿಸುತ್ತಿತ್ತು.

ನೆಹರು ನಿಧನಕ್ಕೆ 4 ತಿಂಗಳು ಮೊದಲು ಈ ಸಿಂಡಿಕೇಟ್ ತಿರುಪತಿಯಲ್ಲಿ ಸಭೆ ಸೇರಿ ಮೊರಾರ್ಜಿಯನ್ನು ರಾಜಕೀಯವಾಗಿ ಮುಗಿಸುವ ಬಗ್ಗೆ ಧೀರ್ಘ ಚರ್ಚೆಯನ್ನು ನಡೆಸಿದ್ದರು. ಈ ಚರ್ಚೆಯಲ್ಲಿ ನೆಹರು ನಂತರ ದೇಶದ ಪ್ರಧಾನಿ ಯಾರು ಎಂಬ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಈ ಸಭೆಯಲ್ಲಿ ಮೊರಾರ್ಜಿ ದೇಸಾಯಿಯನ್ನು ಪ್ರಧಾನಿಯಾಗದಂತೆ ತಡೆಯಲು ಬೇಕಾದ ಎಲ್ಲಾ ಉಪಾಯಗಳನ್ನು ಕಂಡುಕೊಳ್ಳಲಾಯಿತು.

morarji desai

* ಮೊರಾರ್ಜಿ ದೇಸಾಯಿ

ಹಾಗೆಂದ ಮಾತ್ರಕ್ಕೆ, ಕಾಂಗ್ರೇಸ್ ಸಂಪೂರ್ಣವಾಗಿ ಕಾಮರಾಜ್ ಹಿಡಿತದಲ್ಲಿತ್ತು ಎಂದರೂ ತಪ್ಪಾಗುತ್ತದೆ. ಕಾಮರಾಜ್ ಅವರನ್ನು ವಿರೋಧಿಸುವವರ ಸಂಖ್ಯೆಯೂ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲೇ ಇತ್ತು. ಈ ಮಾತು 1964 ಮೇ 30ರಂದು ಬಹಿರಂಗವಾಯಿತು. ಅಂದು ಕಾಮರಾಜ್ ಮನೆಯಲ್ಲಿ ನಡೆದ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ಕೈರೊ ಕಾಮರಾಜರಿಗೆ ನೇರ ಸವಾಲು ಹಾಕಿದರು. ಪ್ರಧಾನಿಯನ್ನು ಆಯ್ಕೆ ಮಾಡುವ ಅಧಿಕಾರ ಕಾಂಗ್ರೇಸ್ಸಿನ ಸಂಸದರಿಗಿದೆ ಹೊರತು ನಿಮಗಲ್ಲ ಎಂದು ಬಿಟ್ಟರು. ವಿವಾದಕ್ಕೆ ರೆಕ್ಕೆ ಪುಕ್ಕ ಸೇರಿಕೊಂಡು ಬಿಟ್ಟಿತು.

ಕಾಮ್ ರಾಜ್ ದೇಶದ ಎಲ್ಲಾ ಸಂಸದರನ್ನು ಭೇಟಿಯಾಗಿ ಅವರ ಅಭಿಪ್ರಾಯ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದರು. ಇದೇನು ಸಣ್ಣ ಕೆಲಸವಾಗಿರಲಿಲ್ಲ. ಆದರೆ ಫಲಿತಾಂಶ ಮಾತ್ರ ಶಾಸ್ತ್ರೀಜಿಯವರ ಪರವಾಗಿ ಇತ್ತು. ಕೊನೆಗೂ ಕಾಮರಾಜ್, ಮೊರಾರ್ಜಿಯವರ ಮನೆಗೆ ಭೇಟಿ ನೀಡಿದರು. ತಾವು ತಮ್ಮ ಉಮೆದ್ವಾರಿಕೆಯನ್ನು ವಾಪಾಸು ಪಡೆದುಕೊಳ್ಳಿ ಎಂದು ಮನವೊಲಿಸಲು ಕಾಮರಾಜ್ ಹೋಗಿರಲಿಲ್ಲ. ಬದಲಾಗಿ ಚುನಾವಣೆ ನಡೆದರೆ ಪಕ್ಷದ ವರ್ಚಸ್ಸು ಹಾಳಾಗುತ್ತದೆ. ಹಾಗಾಗಿ ಚುನಾವಣೆ ನಡೆಯೋದಿಲ್ಲ. ಸರ್ವಾನುಮತದಿಂದ ಶಾಸ್ತ್ರೀಜಿಯವರ ಆಯ್ಕೆ ನಡೆಯುತ್ತದೆ ಎನ್ನುವುದನ್ನು ತಿಳಿಸಲು ಹೋಗಿದ್ದರು. ಮೊರಾರ್ಜಿ ದೇಸಾಯಿಯವರಿಗೆ ಇನ್ನು ಯಾವುದೇ ಮಾರ್ಗ ಉಳಿದಿರಲಿಲ್ಲ. ಕೊನೆಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ದೇಶದ ಪ್ರಧಾನಿಯಾಗಿ ಆಯ್ಕೆಯಾದರು. ಅದು ಭಾರತದ ಮೊದಲ ಪ್ರಜಾಪ್ರಭುತ್ವದ ವಿಜಯ..

ಮದ್ದಿಗೆ ಹಣ ಹೊಂದಿಸಲಾಗದೆ ಮಗಳನ್ನು ಕಳೆದುಕೊಂಡ ಒಬ್ಬ ಬರಿಗೈ ಪಕೀರ ದೇಶದ ಪ್ರಧಾನಿ ಕುರ್ಚಿಯನ್ನು ಅಲಂಕರಿಸಿದ್ದ. ಪ್ರಧಾನಿಯಾದ ನಂತರವೂ ಅವರಿಗೆ ಒಂದು ಕಾರು ಖರೀದಿಸಲು ಬ್ಯಾಂಕಿನಿಂದ ಸಾಲ ಪಡೆಯಬೇಕಾಯಿತು. ಶಾಸ್ತ್ರೀಜಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಕಾಮರಾಜ್ ಅವರು ತನ್ನ ಭಾಷಣದಲ್ಲಿ ಒಂದು ಮಾತನ್ನು ಹೇಳಿದರು. ಈ ಮಾತು ಮುಂದಿನ ಸರಕಾರ ಹೇಗೆ ಕೆಲಸ ಮಾಡಬೇಕು ಎಂಬುವುದನ್ನು ಸ್ಪಷ್ಟವಾಗಿ ಸೂಚಿಸುವಂತಿತ್ತು.

ಕಾಮರಾಜ್ ಸಾಮೂಹಿಕ ನಾಯಕತ್ವದ ಮಂತ್ರವನ್ನು ಘೋಷಿಸಿದರು. ಇದರಿಂದಾಗಿ ಪ್ರಧಾನಮಂತ್ರಿ ಕಚೇರಿಗಿಂತ ಕಾಂಗ್ರೇಸ್ ಕಛೇರಿಗೆ ಹೆಚ್ಚಿನ ಮಹತ್ವ ಬಂದು ಬಿಟ್ಟಿತು. ಶಾಸ್ತ್ರೀಜಿಯವರು ಪ್ರತಿಯೊಂದು ಫೈಲುಗಳನ್ನು ಕಾಮರಾಜ್ ಅವರಿಗೆ ತೋರಿಸದೇ ಸಹಿ ಮಾಡುವಂತಿರಲಿಲ್ಲ. ಕಾಮ್ ರಾಜ್, ಶಾಸ್ತ್ರಿಯವರನ್ನು ತನ್ನ ಕೈಗೊಂಬೆಯಂತೆ ಬಳಸಲು ಬೇಕಾಗಿ ಪ್ರಧಾನಿ ಮಾಡಿದ್ದರೇ..? ಇಲ್ಲವೆನ್ನುವಂತಿಲ್ಲ. ಆ ಮನುಷ್ಯ ಬದುಕಿದ್ದಷ್ಟು ಕಾಲ ಕಿಂಗ್ ಮೇಕರ್ ಆಗಿ ಪಕ್ಷ, ಸರಕಾರ ಎಲ್ಲವನ್ನೂ ನಿಯಂತ್ರಿಸಿಕೊಂಡಿದ್ದ.

ಶಾಸ್ತ್ರಿಯವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಮಂತ್ರಿಮಂಡಲದಲ್ಲೂ ಅವರನ್ನು ಪ್ರಧಾನಮಂತ್ರಿಯಂತೆ ನೋಡಲಾಗುತ್ತಿರಲಿಲ್ಲ. ಯಾರೋ ಶಿಫಾರಸ್ಸು ಮಾಡಿ ಅಧಿಕಾರಕ್ಕೆ ಬಂದ ಗುಮಾಸ್ತನಂತೆ ಅವರನ್ನು ನಡೆಸಿಕೊಳ್ಳಲಾಯಿತು.. ಪತ್ರಕರ್ತರೂ ಕೂಡ ಅವರಿಗೆ ಅತ್ಯಂತ ಕೆಟ್ಟ ಪ್ರಶ್ನೆಗಳನ್ನು ಕೇಳಿ ಮುಜುಗರಕ್ಕೆ ಈಡು ಮಾಡುತ್ತಿದ್ದರು. ಇದರಿಂದಾಗಿ ಅವರು ಪತ್ರಕರ್ತರೊಂದಿಗೆ ವ್ಯವಹರಿಸುವುದನ್ನೇ ಬಿಟ್ಟುಬಿಟ್ಟರು.

ಶಾಸ್ತ್ರಿಯವರ ಮೇಲಿನ ದಬ್ಬಳಿಕೆ ಇಲ್ಲಿಗೆ ನಿಲ್ಲಲಿಲ್ಲ. ನೆಹರು ಪ್ರಧಾನಿಯಾಗಿದ್ದಾಗ ಅವರು ವಾಸಿಸುತ್ತಿದ್ದ ತೀನ್ ಮೂರ್ತಿ ಭವನ, ಮುಂದೆ ಅಧಿಕೃತ ಪ್ರಧಾನಿ ನಿವಾಸವೆಂದು ಘೋಷಿಸಲಾಗಿತ್ತು. ಶಾಸ್ತ್ರೀಜಿಯವರೂ ಅಲ್ಲೇ ವಾಸವಾಗಿದ್ದರು. ಆದರೆ ಈ ಮದ್ಯೆ ಇಂದಿರಾ ಗಾಂಧಿ ಶಾಸ್ತ್ರಿಯವರನ್ನು ಅಲ್ಲಿಂದ ತೆರವು ಮಾಡಿ ಅಲ್ಲಿ ನೆಹರು ನೆನಪಿಗಾಗಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಡ ಹೇರತೊಡಗಿದರು.

ನೆಹರು ಸಹೋದರಿ ಕೃಷ್ಣಹಥಿ ಸಿಂಗ್ ಶಾಸ್ತ್ರಿ ಅವರಿಗೆ ಪತ್ರ ಬರೆದು ಕೂಡಲೇ ಬಂಗಲೆ ಖಾಲಿ ಮಾಡುವಂತೆ ಧಮಕಿ ಹಾಕಿದ್ದಲ್ಲದೆ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವ ಕಾರಣ ಇಂದಿರಾ ಗಾಂಧಿ ಆಗಾಗ ಮೂರ್ಛೆ ಬಂದು ಬೀಳುತ್ತಿದ್ದಾರೆ ಎಂದು ಹೆದರಿಸಿದರು. ಈ ಪತ್ರವನ್ನು ಹರಿದು ಹಾಕಿದ ಶಾಸ್ತ್ರಿ ಇನ್ನು ನನ್ನ ಜೀವನದಲ್ಲಿ ಎಂದೂ ಆ ಬಂಗಲೆಗೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಅಧಿಕಾರ ಹಿಡಿದು ಕೇವಲ ಮೂರು ತಿಂಗಳಷ್ಟೇ ಕಳೆದಿತ್ತು. ಅಷ್ಟರಲ್ಲೇ ಶಾಸ್ತ್ರೀ ವಿರುದ್ದ ವಿರೋಧ ಪಕ್ಷಗಳು ಅವಿಶ್ವಾಸ ಪ್ರಸ್ತಾಪವನ್ನು ಮುಂದಿಟ್ಟವು. ಇದರಲ್ಲಿ ಇಂದಿರಾ ಬಣದ ಕಾಂಗ್ರೇಸಿಗರ ಕೈವಾಡ ದೊಡ್ಡಮಟ್ಟದಲ್ಲಿತ್ತು ಎನ್ನಲಾಗಿದೆ. ದೇಶ ನೆಹರು ಚಿಂತನೆಯಲ್ಲೆ ನಡೆಯಬೇಕು. ನೆಹರು ಜಾರಿ ಮಾಡಿದ ತಲೆಬುಡವಿಲ್ಲದ ಯೋಜನೆಗಳನ್ನೆಲ್ಲಾ ಕುರುಡರ ಹಾಗೆ ಮುಂದುವರೆಸಬೇಕೆಂಬುದು ಅವರ ವಾದವಾಗಿತ್ತು.

ಆದರೆ ಹಿರಿಯ ಮುತ್ಸದ್ದಿಯಾಗಿದ್ದ ಶಾಸ್ತ್ರೀಜಿ ಅದಕ್ಕೆ ಒಪ್ಪಲಿಲ್ಲ. ಆಹಾರ ಸ್ವಾವಲಂಬನೆಗಾಗಿ ಹತ್ತಾರು ನೂತನ ಯೋಜನೆಗಳನ್ನು ಜಾರಿಗೆ ತಂದರು. ಇದು ನೆಹರು ಬಾಲ ಬಡುಕರಿಗೆ ಅಪಥ್ಯವಾಗತೊಡಗಿತು. ಪರಿಣಾಮವಾಗಿ ಶಾಸ್ತ್ರಿ ವಿರುದ್ದ ಅವಿಶ್ವಾಸ ಮತ ಮಂಡನೆಯಾಯಿತು. ಆದರೆ ಆ ಪ್ರಸ್ತಾಪ ಬಿದ್ದು ಹೋಯಿತು. ಶಾಸ್ತ್ರೀಜಿ ವಿಶ್ವಾಸಮತ ಗೆದ್ದುಕೊಂಡರು. ಆದರೆ ನಾಲ್ಕೂ ದಿಕ್ಕಿನಿಂದ ವಿರೋಧಿಗಳ ಷಡ್ಯಂತ್ರ , ಕುಸಿಯುತ್ತಿರುವ ದೇಶದ ಅರ್ಥವ್ಯವಸ್ಥೆ, ಎಲ್ಲವೂ ಅವರನ್ನು ಇನ್ನಿಲ್ಲದಂತೆ ಕಾಡಿತು.

ಈ ಸಮಯದಲ್ಲೇ ಶಾಸ್ತ್ರೀ ಒಂದು ವಿಚಿತ್ರ ಘೊಷಣೆಯನ್ನು ಮಾಡಿದರು. “ದೇಶದ ಜನರು ಒಂದು ದಿನದ ಉಪವಾಸವನ್ನು ಮಾಡಿ ಆಹಾರ ಉಳಿತಾಯ ಮಾಡಬೇಕು”. ಈ ಘೋಷಣೆಗೆ ಅಭೂತಪೂರ್ವ ಜನಬೆಂಬಲ ದೊರಕಿತು. ಇದಲ್ಲದೆ, ಶಾಸ್ತ್ರೀಜಿ ತನ್ನ ಬಂಗಲೆಯ ಹೊರಗಿದ್ದ ಉದ್ಯಾನವನವನ್ನು ಎರಡು ಎತ್ತುಗಳಿಂದ ತಾವೇ ಸ್ವತಃ ಉತ್ತು ಅದರಲ್ಲಿ ಬಿತ್ತನೆ ಮಾಡಿದರು. ಜೈಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಜಾರಿಗೆ ತಂದರು. ಈ ಎಲ್ಲಾ ಕೆಲಸಗಳು ಪ್ರತಿಯೊಂದಕ್ಕೂ ವಿದೇಶಗಳತ್ತ ನೋಡುವ, ಕೃಷಿಯ ಕತ್ತು ಹಿಸುಕಿ ಕೈಗಾರಿಕೆಯನ್ನು ಪೋಷಿಸುವ ನೆಹರು ಚಿಂತನೆಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ರಾಜಕೀಯ ವಿರೋಧದ ನಡುವೆಯೂ ಶಾಸ್ತ್ರೀಜಿಯವರ ಒಂದು ಹೊಸ ವರ್ಚಸ್ಸು ಜನರ ಮದ್ಯದಲ್ಲಿ ಬೆಳೆಯತೊಡಗಿತು.

India-Dalai Lama-Politics

* ಲಾಲ್ ಬಹದೂರ್ ಶಾಸ್ತ್ರೀ

ಈ ಮದ್ಯೆ, ಮತ್ತೊಂದು ಆಘಾತ ಶಾಸ್ತ್ರೀಜಿಯವರ ಮೇಲೆರಗಿತು. ಗುಜರಾತಿನ ಕಛ್ ರಣಭೂಮಿಯಲ್ಲಿ ಪಾಕಿಸ್ಥಾನಿ ಸೈನಿಕರು ಒಳ ನುಸುಳಿದ್ದಲ್ಲದೆ ಒಂದಷ್ಟು ಪ್ರದೇಶವನ್ನೂ ಅತಿಕ್ರಮಿಸಿಕೊಂಡಿದ್ದರು. ಗುಂಡಿನ ಮೊರೆತ ದಿಲ್ಲಿ ತಲುಪುವಷ್ಟರಲ್ಲಿ 16 ಜನ ನಾಗರೀಕರು ಹೆಣವಾಗಿ ಹೋಗಿದ್ದರು. 1 ಸೆಪ್ಟೆಂಬರ್ 1965 ಪಾಕಿಸ್ಥಾನ ಮತ್ತೊಂದು ಆಘಾತಕಾರಿ ಕೆಲಸಕ್ಕೆ ಕೈಹಾಕಿತು. ಕಾಶ್ಮೀರದ ಛಂಬ್ ಪ್ರದೇಶದಲ್ಲಿ ಭಾರತೀಯ ಸೈನಿಕರ ಮೇಲೆ ಏಕಾಏಕಿ ತೋಪುಗಳಿಂದ ದಾಳಿ ಮಾಡಿ ಅಪಾರ ಪ್ರಮಾಣದ ಸಾವು ನೋವಿಗೆ ಮುಂದಾಯಿತು.

ಪಾಕಿಸ್ಥಾನದ ಅಧ್ಯಕ್ಷ ಆಯೂಬ್ ಖಾನ್ ಮತ್ತು ಝುಲ್ಫಿಕರ್ ಅಲಿ ಬುಟ್ಟೋ ಇಬ್ಬರೂ ಕೂಡ ಕಾಶ್ಮೀರವನ್ನು ಕಬಳಿಸಲು ತುದಿಗಾಲಲ್ಲಿ ನಿಂತಿದ್ದರು. 1962ರಲ್ಲಿ ಭಾರತ ಚೀನಾದ ಮುಂದೆ ಹೀನಾಯವಾಗಿ ಸೋತ ಘಟನೆಯಿಂದ ಪ್ರೇರಿತರಾಗಿ ಪಾಕಿಸ್ಥಾನಿಗಳು ಈ ದಾಳಿ ನಡೆಸಿದ್ದರು. ಆದರೆ ನೆಹರು ನೀತಿಗಳನ್ನು ಅದಾಗಲೇ ಗುಡಿಸಿ ಬಿಟ್ಟಿದ್ದ ಶಾಸ್ತ್ರೀಜಿಯವರು, ಒಂದು ಭಯಂಕರ ಸಂಗ್ರಾಮಕ್ಕೆ ಭಾರತದ ಸೈನ್ಯವನ್ನು ಸಿದ್ದಗೊಳಿಸಿದರು.

ಲಾಹೋರ್ ಮತ್ತು ಪಂಜಾಬ್ ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿ ಭಾರತದ ವಾಯುಸೇನೆ ಭಯಂಕರ ದಾಳಿ ಮಾಡಿತು. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಎರಡು ದಿನ ಯುದ್ದ ಮುಂದುವರೆದಿದ್ದರೆ ಪಾಕಿಸ್ಥಾನಕ್ಕೆ ರಾಜಧಾನಿಯೇ ಉಳಿಯುತ್ತಿರಲಿಲ್ಲ. ಸಿಯಾಲ್ಕೋಟ್ ಭಾರತದ ವಶಕ್ಕೆ ಬಂದು ಬಿಟ್ಟಿತು. 65ರ ಯುದ್ದದ ಬೆಂಕಿ ಶಾಸ್ತ್ರೀಜಿಯವರನ್ನು ಆವರಿಸಿದ್ದ ದುರ್ಬಲ ಪ್ರಧಾನಿ ಎಂಬ ಪರದೆಯನ್ನು ಸುಟ್ಟು ಬೂದಿ ಮಾಡಿತ್ತು. ಅಮೇರಿಕಾದ ಒತ್ತಡಕ್ಕೂ ಶಾಸ್ತ್ರೀಜಿ ಮಣಿಯಲಿಲ್ಲ. ಕೊನೆಗೆ ವಿಶ್ವಸಂಸ್ಥೆ ಯುದ್ಧ ವಿರಾಮ ಘೋಷಣೆ ಮಾಡಿತು. ಪಾಕಿಸ್ಥಾನ ಬದುಕಿದೆಯಾ ಬಡಜೀವವೇ.. ಎಂದು ಎದ್ದು ಬಿದ್ದು ಓಡಿತು. ಆ ಯುದ್ದ ಸಂದರ್ಭದಲ್ಲಿ ನಾಗರೀಕ ಪ್ರದೇಶಗಳಿಗೆ ವೈಮಾನಿಕ ದಾಳಿ ನಡೆಯುವ ಸಾಧ್ಯತೆ ಇದ್ದ ಕಾರಣ ರಾತ್ರಿಯಾಗುತ್ತಿದ್ದಂತೆ ಮನೆಗಳಲ್ಲಿ ದೀಪ ಹಚ್ಚುವಂತಿರಲಿಲ್ಲ. ಕೊನೆಗೂ ಜನರು ಈ ಬ್ಲಾಕ್ ಔಟ್ ನಿಂದ ಹೊರಬಂದರು.

ಪಾಕಿಸ್ಥಾನದ ಸುಮಾರು 710 ಚ.ಕಿ.ಮಿ. ಭೂಮಿ ನಮ್ಮ ಹಿಡಿತದಲ್ಲಿತ್ತು. ಅಂದರೆ ಅದು ಸುಮಾರು ಅರ್ದ ದಿಲ್ಲಿಯಷ್ಟಾಗುತ್ತದೆ. ಇದು ಭಾರತದ ಅತ್ಯದ್ಭುತ ಯುದ್ಧ ವಿಜಯವಾಗಿತ್ತು. ಯುದ್ಧದಿಂದ ಹೊರಬರುತ್ತಿದ್ದಂತೆ ಶಾಸ್ತ್ರೀಯವರನ್ನು ಹತ್ತಾರು ರಾಜನೈತಿಕ ಸಮಸ್ಯೆಗಳು ಸ್ವಾಗತಿಸಲು ಸಿದ್ಧವಾಗಿ ನಿಂತಿದ್ದವು. ಆರ್ಥಿಕ ಸಚಿವ ಟಿ.ಟಿ. ಕೃಷ್ಣಮಾಚಾರಿ ಮೇಲೆ ಭಾರಿ ಭ್ರಷ್ಟಾಚಾರದ ಆರೋಪ ಕೇಳಿಬರತೊಡಗಿತು. ಕೂಡಲೆ ಪ್ರಧಾನಿಗಳು ಅವರ ವಿರುದ್ಧ ತನಿಖೆ ನಡೆಸಲು ಸಿದ್ಧರಾದರು. ಇದರಿಂದ ಸಿಟ್ಟಾದ ಆ ಮನುಷ್ಯ ತನ್ನ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟ. ನಂತರ ಆತ ಹೋಗಿದ್ದು ನೇರ ಇಂದಿರಾ ಗಾಂಧಿಯ ಮನೆಗೆ. ಯಾಕೆಂದರೆ ಅಲ್ಲೊಂದು ನಿಗೂಢವಾದ ಗುಂಪು ಸಿದ್ದಗೊಂಡಿತ್ತು. ಶಾಸ್ತ್ರೀಜಿಯವರಿಗೆ ಹೊಂಡ ತೋಡುತ್ತಿದ್ದ ಆ ಗುಂಪಿನ ನಾಯಕಿ ಇಂದಿರಾ ಗಾಂಧಿ.

ಪೂರ್ವ ನಿಗದಿಯಂತೆ ಭಾರತದ ರಾಯಭಾರಿಯಾಗಿ ಇಂದಿರಾಗಾಂಧಿ ಬ್ರಿಟನ್ ಗೆ ತೆರಳಬೇಕಿತ್ತು. ಆದರೆ ಆಕೆ ತೆರಳಲಿಲ್ಲ. ಆಕೆಗೆ ಒಂದಷ್ಟು ಮಹತ್ವದ ಕೆಲಸಗಳು ಭಾರತದಲ್ಲಿ ಉಳಿದುಕೊಂಡಿದ್ದವು. ಆಕೆಗಿದ್ದ ಮೊದಲ ಕೆಲಸವೇ ಶಾಸ್ತ್ರೀಜಿಯವರಿಗೊಂದು ಗತಿ ಕಾಣಿಸೋದು.

indira gandhi

* ಇಂದಿರಾ ಗಾಂಧಿ

4 ಜನವರಿ 1966… ಭಾರತ ಪಾಕಿಸ್ಥಾನದ ಮದ್ಯೆ ಯುದ್ಧ ವಿರಾಮ ಘೋಷಣೆಯಾಗಿದ್ದರೂ, ಎರಡೂ ಸೇನೆಗಳು ಗಡಿಯಲ್ಲಿ ಎದುರು ಬದುರು ನಿಂತಿದ್ದವು. ಸೋವಿಯತ್ ರಷ್ಯಾ ಎರಡೂ ದೇಶಗಳ ಮದ್ಯೆ ಮದ್ಯಸ್ಥಿಕೆ ಮಾಡಲು ಒಪ್ಪಿತು. ತಾಷ್ಕೆಂಡಿನಲ್ಲಿ ಮಾತುಕತೆಗೆ ಸ್ಥಳ ನಿಗದಿಯಾಯಿತು. ಆಯೂಬ್ ಖಾನ್ ಮತ್ತು ಶಾಸ್ತ್ರೀಜಿ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆಯಿತು. ಗಡಿಯಿಂದ ಸೇನೆ ಹಿಂದೆ ಸರಿಯಬೇಕು, ಆಕ್ರಮಿತ ಪ್ರದೇಶಗಳನ್ನು ಮರಳಿ ನೀಡಬೇಕು. ಎರಡೂ ದೇಶಗಳಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಬಲಪ್ರಯೋಗಕ್ಕೆ ಮುಂದಾಗಬಾರದು. ಶಾಂತಿಯುತ ಮಾರ್ಗದಿಂದ ಸಮಸ್ಯೆ ಪರಿಹರಿಸಿಕೊಳ್ಳಬೇಕು ಮೊದಲಾಗಿ ಕೆಲವಾರು ವಿಚಾರಗಳಲ್ಲಿ ಚರ್ಚೆ ನಡೆಯಿತು.

11 ಜನವರಿ 1966 ರಾತ್ರಿ ಊಟ ಮಾಡಿ ವಿಶ್ರಾಂತಿ ಪಡೆದುಕೊಂಡ ಶಾಸ್ತ್ರೀಜಿ ಭಾರತಕ್ಕೆ ಕರೆ ಮಾಡಿ ಪತ್ನಿಯೊಂದಿಗೆ ಮಾತನಾಡಿದ್ದಾರೆ. ನಂತರ ನಿದ್ರೆಗೆ ಜಾರಿದ ಅವರು ಮುಂಜಾನೆ ಏಳಲೇ ಇಲ್ಲ. ಕೇವಲ ಹದಿನೇಳು ತಿಂಗಳು ಆಡಳಿತ ನಡೆಸಿದ ಶಾಸ್ತ್ರೀಜಿಯವರು ನಿಗೂಢವಾಗಿ ಇಹಲೋಕದ ಯಾತ್ರೆ ಮುಗಿಸಿದರು. ಅವರ ಸಾವಿಗೆ ಕಾರಣವೇನು ಎನ್ನುವುದು ಇಂದಿನ ತನಕ ತಿಳಿದು ಬಂದಿಲ್ಲ. ಅವರ ಮಕ್ಕಳು ಹೇಳುವ ಪ್ರಕಾರ ಮೃತದೇಹ ಕಡು ನೀಲಿ ಬಣ್ಣಕ್ಕೆ ತಿರುಗಿತ್ತಂತೆ. ಹೃದಯಾಘಾತದಿಂದ ಮೃತರಾದರೆ ಹಾಗಾಗುತ್ತದೆಯೇ..? ರಸ್ತೆ ಬದಿಯಲ್ಲಿ ಸತ್ತು ಬಿದ್ದ ಕುಡಕನನ್ನು ಕೂಡ ಮರಣೋತ್ತರ ಪರೀಕ್ಷೆ ಮಾಡದೆ ಸುಡುವುದಿಲ್ಲ. ಆದರೆ ದೇಶದ ಪ್ರಧಾನಿಯ ಶವವನ್ನು ಕನಿಷ್ಠ ಪೋಸ್ಟ್ ಮಾರ್ಟಮ್ ಕೂಡ ಮಾಡದೆ ಸುಟ್ಟು ಬಿಡಲಾಯಿತು. ಅವರ ಶವದೊಂದಿಗೆ ಅವರ ಸಾವಿನ ಹಿಂದಿನ ನಿಗೂಢ ಸತ್ಯಗಳೂ ಸುಟ್ಟು ಹೋದವು. ಇಂದಿನ ತನಕ ಹಲವಾರು ಆಯೋಗಗಳು ರಚನೆಯಾದರೂ ಈ ಪ್ರಕರಣವನ್ನು ಮಾತ್ರ ಭೇದಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಯಾಕೆ..?

ಶಾಸ್ತ್ರಿಯವರನ್ನು ತೀನ್ ಮೂರ್ತಿ ಬಂಗಲೆಯಿಂದ ತೆರವುಗೊಳಿಸಿದವರು ಕೊನೆಗೆ ಅವರ ಸಮಾಧಿಯನ್ನು ಕೂಡ ಗಾಂದಿ ಸ್ಮಾರಕದ ಬಳಿ ಮಾಡಲು ಬಿಡಲಿಲ್ಲ. ಎಂಥ ಕಟುಕರು..? ಏನೇ ಇರಲಿ. ಸ್ವದೇಶಿ ಸ್ವಾಭಿಮಾನಿ ಸದೃಡ ಭಾರತದ ಕನಸು ಕಂಡ ಅಪೂರ್ವ ವ್ಯಕ್ತಿ ಲಾಲ್ ಬಹಾದ್ದೂರ್ ಶಾಸ್ತ್ರಿ. ಅವರ ಸಾವಿನ ಸಂಚು ಬಯಲಾದರೆ ಭಾರತದ ಅತೀದೊಡ್ಡ ರಾಜಕೀಯ ಪಕ್ಷದ ಅಡಿಗಲ್ಲುಗಳೇ ಅದುರಿ ಬೀಳುತ್ತವೆ.

ತಾಷ್ಕೆಂಡಿನಲ್ಲಿ ಮಾಡಲಾದ ಹಲವಾರು ಒಪ್ಪಂದಗಳು ಪಾಕಿಸ್ಥಾನದ ಹಿತದಲ್ಲಿದ್ದವು. ಈ ಒಪ್ಪಂದಕ್ಕೆ ಸಹಿ ಹಾಕಲು ಅಮೇರಿಕಾದಿಂದ ಒತ್ತಡವಿತ್ತು. ಆದರೆ ಅಮೇರಿಕಾದ ಒತ್ತಡಕ್ಕೆ ಮಣಿಯದ ಶಾಸ್ತ್ರೀಜಿಯವರು ತನ್ನ ಪಕ್ಷದ ಒಳಗಿನಿಂದ ಬಂದ ಒತ್ತಡಕ್ಕೆ ಮಣಿದರು. ಹಾಗಾದರೆ ಒತ್ತಡ ಹೇರಿದ ಪ್ರಭಾವಿ ಯಾರು..? ನೆಹರು ನಂತರ ಯಾರು ಎಂಬ ಪ್ರಶ್ನೆಗೆ ಇಂದಿರಾ ಎಂಬ ಸಿದ್ಧ ಉತ್ತರವಿತ್ತು. ಆದರೆ ಮದ್ಯದಲ್ಲಿ ಈ ಸಜ್ಜನರೊಬ್ಬರು ಬಂದು ಹೋದರಷ್ಟೆ…

Leave a Reply

Your email address will not be published. Required fields are marked *