Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬದಿಯಡ್ಕ ಬಾಲು ಇನ್ನಿಲ್ಲ !

ಬದಿಯಡ್ಕ(ಕಾಸರಗೋಡು): ಬದಿಯಡ್ಕ ಪೇಟೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಚಿರಪರಿಚಿತರಾಗಿರುವ, ಎಲ್ಲರ ಅಚ್ಚುಮೆಚ್ಚಿನ, ವಿಶೇಷ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದ ಬದಿಯಡ್ಕದ ಬಾಲು ಅಥವಾ ಬಾಲಕೃಷ್ಣ ಇಂದು ಮಧ್ಯಾಹ್ನ ಇಹಲೋಕವನ್ನು ತ್ಯಜಿಸಿ ಪರಲೋಕವನ್ನರಸಿರುವುದು ಪೇಟೆಯ ಕಳೆಯನ್ನು ಮಂದಗೊಳಿಸಿದೆ.

ಚಿಕ್ಕಂದಿನಲ್ಲಿ ಬದಿಯಡ್ಕ ಪೇಟೆಯಲ್ಲಿ ತಲೆ ಹೊರೆ ಕಾರ್ಮಿಕನಾಗಿಯೂ, ಬಸ್ ತಂಗುದಾಣದಲ್ಲಿ ಪ್ರಯಾಣಿಕರಿಗೆ ಬಸ್ ಸೇವೆಗಳ ಬಗ್ಗೆ ಮಾಹಿತಿ ನೀಡುತ್ತಲೂ ಇದ್ದ ಬಾಲು, ಹಠಾತ್ತನೆ ಮಾನಸಿಕ ಸ್ಥಿಮಿತ ಕಳಕೊಳ್ಳುವ ದುರ್ಗತಿ ಬಂದುದು ವಿಪರ್ಯಾಸ.

ಬದಿಯಡ್ಕ ಸನಿಹದ ವಳಮಲೆಯ ನಿವಾಸಿಯಾದ ಬಾಲು (61), ಅಂದಿನಿಂದ ಇಂದಿನವರೆಗೂ ಪೇಟೆ ಪರಿಸರವನ್ನೇ ಮನೆಯಾಗಿಸಿ ನಿರುಪದ್ರವಿಯಾಗಿ ಅಂಗಡಿ ಬಾಗಿಲುಗಳನ್ನು, ರಸ್ತೆಗಳನ್ನು ಉಮೇದು ಬಂದಾಗೆಲ್ಲ ಗುಡಿಸಿ ಒಪ್ಪ ಓರಣವಾಗಿಸುತ್ತಿದ್ದುದನ್ನು ಕಾಯಕವನ್ನಾಗಿಸಿ ಜನಪ್ರಿಯನಾಗಿದ್ದ.

ಅಂಗಡಿ, ಹೋಟೆಲ್ ಗಳಂತಹ ವ್ಯಾಪಾರ ಕೇಂದ್ರಗಳನ್ನು ಸ್ವಚ್ಚಗೊಳಿಸಿದಾಗೆಲ್ಲ ಪ್ರೀತಿಯಿಂದ ಅವರು ನೀಡುತ್ತಿದ್ದ ಹಣವೋ, ಆಹಾರದಲ್ಲೋ ಸರ್ವಸ್ವವನ್ನೂ ಕಂಡು ಬದುಕುತ್ತಿದ್ದ ಬಾಲು, ಪೇಟೆಯ ನಾಗರಿಕರಿಗೆ ಅಚ್ಚುಮೆಚ್ಚು. ಬಾಲುವಿನ ತಮ್ಮನಾದ ರಾಮ ಎಂಬವನೂ ಮಾನಸಿಕ ಅಸ್ವಸ್ಥನಾಗಿ ಪೇಟೆಯಲ್ಲಿ ಅಣ್ಣನ ದಾರಿಯನ್ನೇ ಹಿಡಿದಿರುವುದು ದುರ್ದೈವ.

ಇದರ ಹಿನ್ನೆಲೆಯಲ್ಲಿ ಕುಟುಂಬ ಶ್ರೀ ಜಿಲ್ಲಾ ಮಿಷನ್ ಬದಿಯಡ್ಕ ಸಿಡಿಎಸ್ ಸಮಿತಿಯ ಮುಖಾಂತರ ಬಾಲು ಹಾಗೂ ರಾಮುವಿನ ಬಗ್ಗೆ ಸಮಗ್ರ ವರದಿಯನ್ನು ತರಿಸಿ ಅಗಧಿಯಾಶ್ರಯ ಯೋಜನೆ(ನಿರ್ಗತಿಕ ಆಶ್ರಯ ಯೋಜನೆ)ಯ ಅಡಿಯಲ್ಲಿ ಸಹಕಾರ ಯೋಜನೆಯನ್ನು ರೂಪಿಸಿದ್ದರೂ ಸರಕಾರದ ಅಂಗೀಕಾರ ಲಭಿಸದೆ ನೆನೆಗುದಿಗೆ ಬಿದ್ದಿತ್ತು.

ಈ ಮಧ್ಯೆ ಸಮರ್ಪಕ ಚಿಕಿತ್ಸೆಯ ಕೊರತೆಯಿಂದ ನಲುಗುತ್ತಿದ್ದ ಬಾಲು, ಅಧಿಕೃತರ ಸಹಾಯ ಹಸ್ತಕ್ಕೆ ಕಾಯದೆ ಕಾಯವನ್ನು ಬಿಟ್ಟು ಪರಲೋಕವಾಸಿಯಾಗಿರುವುದು ಬದಿಯಡ್ಕವನ್ನು ಮೌನಗೊಳಿಸಿದೆ. ಬಾಲು, ನಾರಾಯಣಮಂಗಲ ದಿ.ಅಪ್ಪಯ್ಯ ಚೆಟ್ಟಿಯಾರ್-ಕುಂಞ್ಞಿಮ್ಮ ದಂಪತಿಗಳ ಪುತ್ರ. ಮೃತ ಬಾಲು ಸಹೋದರ ಮಹಾಲಿಂಗ, ರಾಮ, ನಾಗೇಶ, ಸಹೋದರಿ ಕೊರಪ್ಪಾಳು ಇವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *